ಇತಿಹಾಸ ಸಾಹಿತ್ಯ

ಕ್ರಿ. ಪೂ. ಐದನೆಯ ಶತಮಾನದಲ್ಲಿದ್ದ ಗ್ರೀಕರಿಂದಲೇ ನಿಜವಾದ ಇತಿಹಾಸದ ಚರಿತ್ರೆ ಆರಂಭವಾಗುತ್ತದೆ. ಇತಿಹಾಸಕ್ಕೆ ಇಂಗ್ಲಿಷಿನಲ್ಲಿ ಸಮಾನಪದವಾದ ಹಿಸ್ಟರಿ ಎಂಬುದು ಹಿಸ್ಟೊರಿಯ ಎಂಬ ಗ್ರೀಕ್ ಪದದಿಂದ ಬಂದದ್ದು. ಪೊರೆಯನ್ನು ಅಥವಾ ಬಲೆಯನ್ನು ನೇಯುವುದು. ಅರಳಿಸುವುದು ಎಂದು ಅದರ ಅರ್ಥ. ಗ್ರೀಕರೇ ಮೊಟ್ಟಮೊದಲಿಗೆ ಗತಕಾಲದ ಕಡೆಗೆ ತರ್ಕಬದ್ಧವಾಗಿ ವಿಚಾರ ಹರಿಸಿದವರು. ಅವರು ಕಾರ್ಯಕಾರಣ ಸಂಬಂಧಗಳನ್ನು ಪರಿಶೀಲಿಸಿ ಅವುಗಳ ದೃಷ್ಟಿಯಲ್ಲಿ ಗತಕಾಲದ ಘಟನೆಗಳನ್ನು ಸುಸಂಬದ್ಧವಾಗಿ ನಿರೂಪಿಸಲು ಯತ್ನಿಸಿದರು. ಹೀರಡಟಸ್ ತನ್ನ ಕೃತಿಯನ್ನು ಒಂದು ಇತಿಹಾಸವೆಂದು ಕರೆದ. ಇತಿಹಾಸಕಾರ ತನಗೆ ತೋಚಿದ ರೀತಿಯಲ್ಲಿ ವಸ್ತುವನ್ನು ಮಾರ್ಪಡಿಸಬಾರದು ಎಂಬುದು ಅವನ ಮತ.

	ಆದರೆ ಇತಿಹಾಸದ ಘಟನೆಗಳೆಷ್ಟು ಮುಖ್ಯವೋ ಅದರಲ್ಲಿ ಪಾತ್ರವಹಿಸಿದ ವ್ಯಕ್ತಿಗಳು ಅಷ್ಟೇ ಮುಖ್ಯವೆಂದು ತಿಳಿದ ಹಲವರು ಚರಿತ್ರೆಯ ಮಹಾಪುರಷರ ಜೀವನಚರಿತ್ರೆಗಳನ್ನು ರಚಿಸಿ ಆ ಮೂಲಕ ಆಯಾ ದೇಶಗಳ ಚರಿತ್ರೆಯನ್ನು ತಿಳಿಯುವುದಕ್ಕೂ ಬರೆಯುವುದಕ್ಕೂ ದಾರಿ ತೋರಿಸಿದರು. ಇವರಲ್ಲಿ ಗ್ರೀಸಿನ ಪ್ಲೂಟಾರ್ಕ್ ಮುಖ್ಯನಾದವ (ನೋಡಿ- ಪ್ಲೂಟಾರ್ಕ್). ಪ್ರಾಚೀನ ಗ್ರೀಕ್ ಹಾಗೂ ರೋಮನ್ ದೇಶಗಳ ಸುಪ್ರಸಿದ್ಧ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಬರೆದು ಅಲೆಕ್ಸಾಂಡರನ ಕಾಲದ ಇತಿಹಾಸದ ಮೇಲೆ ಆತ ಬೆಳಕು ಚೆಲ್ಲಿದ. ವ್ಯಕ್ತಿಗಳ ಜೀವನದ ಪ್ರಮುಖ ವಿದ್ಯಮಾನಗಳನ್ನೆಲ್ಲ ಮೊದಲು ನಿರೂಪಿಸಿ, ಕೊನೆಯಲ್ಲಿ ಪಾತ್ರಗಳ ಗುಣಲಕ್ಷಣಗಳನ್ನು ವರ್ಣಿಸಿ ಪರಸ್ಪರ ಹೋಲಿಸುವ ಪ್ಲೂಟಾರ್ಕ್ ಪದ್ಧತಿಯನ್ನು ಡಾ. ಜಾನ್‍ಸನ್ನಿನಿಂದ ಹಿಡಿದು ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಜೀವನಚರಿತ್ರೆಯ ಲೇಖಕರೆಲ್ಲ ಅನುಸರಿಸಿದರು.

	ಮೂಲತಃ ಗತಕಾಲದ ಚರಿತ್ರೆಯ ಕಲಾತ್ಮಕ ನಿರೂಪಣೆ ಇತಿಹಾಸವಾದರೂ ಗತಕಾಲಕ್ಕೆ ಸಂಬಂಧಿಸಿದ ಘಟನೆಗಳ ವಾಸ್ತವ ಹಾಗೂ ಉಪಯುಕ್ತ ವರದಿಯೇ ಇತಿಹಾಸವೆನ್ನಿಸಿಕೊಳ್ಳುವುದಿಲ್ಲ. ಒಂದು ದೃಷ್ಟಿಯಿಂದ ಇತಿಹಾಸ ಶಾಸ್ತ್ರಗ್ರಂಥ. ಗತಕಾಲದ ಗುರುತುಗಳನ್ನೂ ದಾಖಲೆಗಳನ್ನೂ ಹುಡುಕುವಾಗ ಅವುಗಳಿಗೆ ಸಂಬಂಧಿಸಿದ ಪುರಾವೆಗಳನ್ನೂ ಪ್ರಮಾಣಗಳನ್ನೂ ಸಂಗ್ರಹಿಸುವಾಗ ವಿಜ್ಞಾನಿಗಿರಬೇಕಾದ ಕುತೂಹಲ, ಸೂಕ್ಷ್ಮದೃಷ್ಟಿ, ನಿಸ್ಸಂಗ ಮನೋಭಾವ, ಸತ್ಯನಿಷ್ಠೆ, ತಾಳ್ಮೆ, ವಿವೇಚನೆ-ಎಲ್ಲವೂ ಇತಿಹಾಸಕಾರನಲ್ಲಿರಬೇಕು. ನಾನು ಗತಕಾಲಕ್ಕೆ ಸಂಬಂಧಿಸಿದ ಸತ್ಯಾಂಶಗಳನ್ನು ತಿಳಿದುಕೊಳ್ಳಲು ಕುತೂಹಲದಿಂದ ಅಲ್ಲಲ್ಲಿ ಹೋಗಿ ಈ ಅನ್ವೇಷಣೆಯಲ್ಲಿ ತೊಡಗಿದೆ-ಎಂದು ಪ್ರಾಚೀನ ಇತಿಹಾಸಕಾರ ಹೀರಡಟಸ್ ಹೇಳುತ್ತಾನೆ. ಕೇವಲ ವಾಸ್ತವಾಂಶಗಳ ಶೇಖರಣೆ, ಸಂಗ್ರಹಣೆ ಇಷ್ಟೇ ಸಾಲದು. ಅವುಗಳನ್ನು ಯುಕ್ತ ಗಣತಿಯ ಸಂವಿಧಾನಕ್ಕೆ ಒಳಪಡಿಸಬೇಕು. ಹೃದಯಂಗಮವಾಗಿ ಬರೆಯಬೇಕು, ಇತಿಹಾಸ ಕಲೆಯೂ ಹೌದು, ಶಾಸ್ತ್ರವೂ ಹೌದು.

	ಹದಿಮೂರನೆಯ ಶತಮಾನದ ಫ್ರಾನ್ಸಿನ ಗಯಾರ್ಟ್ ಪ್ರಸಿದ್ಧ ಇತಿಹಾಸಕಾರರಲ್ಲಿ ಒಬ್ಬ. ಅವನ ಗ್ರಂಥದಲ್ಲಿ ಕ್ರಿ.ಶ. 1180 ರಿಂದ 1304ರ ವರೆಗಿನ ಫ್ರೆಂಚ್ ದೇಶದ ಇತಿಹಾಸದ ಚಿತ್ರಮಯ ನಿರೂಪಣೆ ನಮಗೆ ದೊರೆಯುತ್ತದೆ. ಇಂಗ್ಲೀಷ್ ಸಾಹಿತ್ಯದಲ್ಲಿ ಈ ಬಗೆಯ ಕೃತಿಗಳು ರಚಿತವಾಗಲು ಪ್ರಾರಂಭವಾದದ್ದು, ವಿವೇಚನಾಯುಗವಾದ ಹದಿನೆಂಟನೆಯ ಶತಮಾನದಲ್ಲಿ. ಕಲಾತ್ಮಕವಾದ ಇತಿಹಾಸ ಕೃತಿಗಳನ್ನು ರಚಿಸಿದವರಲ್ಲಿ ಡೇವಿಡ್ ಹ್ಯೂಮ್ ಮತ್ತು ರಾಬರ್ಟ್‍ಸನ್ ಇಬ್ಬರೂ ಅಗ್ರಗಣ್ಯರು. ಫ್ರಾನ್ಸಿನ ವಾಲ್ಟೇರ್ ಮುಂತಾದವರ ಪ್ರಭಾವದಿಂದ ಸ್ಪೂರ್ತಿ ಪಡೆದು ಇಬ್ಬರೂ ಇಂಗ್ಲೆಂಡು ಹಾಗೂ ಸ್ಕಾಟ್ಲೆಂಡಿನ ಇತಿಹಾಸ ಬರೆದರು. ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ರೊಮ್ಯಾಂಟಿಕ್ ಸಾಹಿತ್ಯದ ಪ್ರಭಾವದಿಂದ ಇತಿಹಾಸದಲ್ಲಿ ಸತ್ಯಕ್ಕಿಂತಲೂ ಕಲ್ಪನೆಗೇ ಹೆಚ್ಚು ಪ್ರಾಧಾನ್ಯ ದೊರೆಯತೊಡಗಿತು. ಕಾವ್ಯದಲ್ಲಿ ಇತಿಹಾಸ ಮುಳುಗತೊಡಗಿತು. ಆಗ ಜರ್ಮನಿಯ ಸುಪ್ರಸಿದ್ಧ ಇತಿಹಾಸ ವಿದ್ವಾಂಸರುಗಳಾದ ಥಿಯೋಡರ್ ಮಾಮ್‍ಸೆನ್ ಮತ್ತು ಲಿಯೋ ಪಾಲ್ಡ್ ವಾನ್ ರಾಂಕ ಎಂಬುವರು ಚರಿತ್ರೆಯ ರಚನೆಯಲ್ಲಿ ಹೊಸದಾದ ವೈಜ್ಞಾನಿಕ ದೃಷ್ಟಿಯ ಆವಶ್ಯಕತೆಯನ್ನು ಎತ್ತಿ ಹಿಡಿದರು. ವಿಷಯಗಳ ಸಮರ್ಪಕ ಜೋಡಣೆ, ಶೈಲಿಯ ಗಾಂಭೀರ್ಯ, ಸ್ಪುಟವಾದ ನಿರೂಪಣೆ ಇವನ್ನು ನಾವು ಅವರ ಗ್ರಂಥಗಳಲ್ಲಿ ಕಾಣಬಹುದು.

	ಇತಿಹಾಸವನ್ನು ಸಾಹಿತ್ಯದ ಶಿಖರಕ್ಕೇರಿಸಿದವರಲ್ಲಿ ಇಂಗ್ಲೆಂಡಿನ ಎಡ್ವರ್ಡ್ ಗಿಬ್ಬನ್ ಪ್ರಧಾನ ಪುರುಷ. ಡಿಕ್ಲೈನ್ ಅಂಡ್ ಫಾಲ್ ಆಫ್ ದಿ ರೋಮನ್ ಎಂಪೈರ್ ಇವನ ಮೇರುಕೃತಿ.		 (ನೋಡಿ- ಗಿಬ್ಬನ್,-ಎಡ್ವರ್ಡ್)

	ಕಲಾಮಯವಾದ ಇತಿಹಾಸ ಗ್ರಂಥಗಳನ್ನು ರಚಿಸಿದವರಲ್ಲಿ ಮುಖ್ಯನಾದವ ಕಾರ್ಲೈಲ್. ಈತ ಫ್ರಾನ್ಸಿನ ಮಹಾ ಕ್ರಾಂತಿಯನ್ನು ಕುರಿತು ಬರೆದ ಫ್ರೆಂಚ್ ರೆವಲ್ಯೂಷನ್ ಎಂಬುದು ಭವ್ಯವಾದ ಸಾಹಿತ್ಯಕೃತಿ. ಪ್ಲೂಟಾರ್ಕ್ ಹಾಕಿಕೊಟ್ಟ ಪುರಾತನ ದಾರಿಯನ್ನು ಸ್ವಲ್ಪಮಟ್ಟಿಗೆ ಕಾರ್ಲೈಲ್ ಅನುಸರಿಸುತ್ತಾನೆ. ಜರ್ಮನಿಯ ದಾರ್ಶನಿಕರ ತೀವ್ರ ಪ್ರಭಾವಕ್ಕೆ ಒಳಗಾಗಿದ್ದ ಕಾರ್ಲೈಲ್ 1825ರಲ್ಲಿ ಪಿಲ್ಲರ್ ಕವಿಯ ಜೀವನಚರಿತ್ರೆ ಬರೆದು ಸುಪ್ರಸಿದ್ಧನಾಗಿದ್ದ. ಒಬ್ಬ ವ್ಯಕ್ತಿಯ ಜೀವನ ಚರಿತ್ರೆಗೂ ಒಂದು ದೇಶದ ಚರಿತ್ರೆಗೂ ಯಾವ ವ್ಯತ್ಯಾಸವೂ ಇಲ್ಲವೆಂಬುದು ಕಾರ್ಲೈಲನ ವಾದ. ಪ್ರತಿಯೊಂದು ರಾಷ್ಟ್ರದ ವೀರರ ಜೀವನ ಚರಿತ್ರೆಯಲ್ಲೂ ಆ ದೇಶದ ಇತಿಹಾಸ ಅಡಕವಾಗಿದೆಯೆಂದು ಆತ ಹೇಳುತ್ತಾನೆ. ಈ ದೃಷ್ಟಿಯನ್ನು ಆತನ ಇತಿಹಾಸಗ್ರಂಥಗಳಲ್ಲೂ ಕಾಣಬಹುದು. ಗಿಬ್ಬನ್ನಿನಲ್ಲಿರುವ ವಸ್ತುನಿಷ್ಟೆ ಕಾರ್ಲೈಲನಲ್ಲಿಲ್ಲ. ಇತಿಹಾಸವನ್ನು ನಾಟಕದ ಸನ್ನಿವೇಶಗಳಂತೆ ನಿರೂಪಿಸುವುದರಲ್ಲಿ ಕಾರ್ಲೈಲನನ್ನು ಮೀರಿಸಿದವರು ವಿರಳ. ಆದರೆ ಇತಿಹಾಸವನ್ನು ನಾಟಕೀಯವನ್ನಾಗಿ ಮಾಡಿ, ಆಯಾ ಕಾಲದ ಪ್ರಮುಖ ರಾಷ್ಟ್ರನಾಯಕರ ಜೀವನದ ಸುತ್ತಲಿನ ಸನ್ನಿವೇಶವನ್ನೂ ಘಟನೆಗಳನ್ನೂ ರಚಿಸುವಾಗ ಅವುಗಳ ಹಿಂದಿರಬಹುದಾದ ಪ್ರೇರಕಶಕ್ತಿಯನ್ನು ವಿವರಿಸುವ ಗೋಜಿಗೇ ಅವನು ಹೋಗುವುದಿಲ್ಲ. (ನೋಡಿ- ಕಾರ್ಲೈಲ್,-ಥಾಮಸ್)

	ಇತಿಹಾಸಕಾರ ಎಸಗಬಹುದಾದ ಲೋಪದೋಷಗಳನ್ನು ನಾವು ಮತ್ತೊಬ್ಬ ಸುಪ್ರಸಿದ್ದ ಚರಿತ್ರಕಾರನಾದ ಮಕಾಲೆಯಲ್ಲೂ ಕಾಣಬಹುದು. ಸತ್ಯಾನ್ವೇಷಣೆಗಿಂತಲೂ ನಾಟಕೀಯ ನಿರೂಪಣೆಗೇ ಮಕಾಲೆ ಹೆಚ್ಚು ಗಮನವೀಯುತ್ತಾನೆ. ಅಲ್ಲಲ್ಲಿ ಸತ್ಯಾಂಶಗಳಿಂದ ದೂರವಾದ ವಿವರಗಳೂ ವ್ಯಕ್ತಿಗಳನ್ನು ಚಿತ್ರಿಸುವಾಗ ತನ್ನ ಸ್ವಂತ ರಾಜಕೀಯ ಅಭಿಪ್ರಾಯಗಳಿಗೇ ಹೆಚ್ದು ಗಮನ ಕೊಟ್ಟಿರುವ ಸನ್ನಿವೇಶಗಳೂ ಬರುತ್ತವೆ. ಭಾವೋದ್ರೇಕದ ಕಾವಿನಲ್ಲಿ ಮಕಾಲೆಯ ಅನಾದೃಶವಾದ ಶೈಲಿ ಇತಿಹಾಸದ ವಾಸ್ತವಾಂಶಗಳನ್ನು ಮರೆಮಾಡುತ್ತದೆ. ಅವನ ಕಥನಶಕ್ತಿ ಅವನ ಇತಿಹಾಸದೃಷ್ಟಿಯನ್ನು ಮಸಕುಮಾಡುತ್ತದೆ. 

	ಇತಿಹಾಸವನ್ನು ಕಾವ್ಯವಸ್ತುವನ್ನಾಗಿ ಅಳವಡಿಸಿಕೊಂಡ ಐತಿಹಾಸಿಕ ಮಹಾಕವಿಗಳಲ್ಲಿ ಶ್ರೇಷ್ಠನಾದವ ಕಾಶ್ಮೀರದ ಸಂಸ್ಕøತ ಕವಿ ಕಲ್ಹಣ. ಇವನ ರಾಜ ತರಂಗಿಣಿ ಶ್ರೇಷ್ಠಗ್ರಂಥ. ಸಂಸ್ಕ್ರತ ಸಾಹಿತ್ಯದಲ್ಲಿ ಚರಿತ್ರೆಯ ಘಟನೆಗಳ ಕ್ರಮಬದ್ಧ ಇತಿಹಾಸದ ನಿರೂಪಣೆಗೆಂದು ಮೀಸಲಾದ ಒಂದೇ ಒಂದು ಗ್ರಂಥ ರಾಜತರಂಗಿಣಿ. ಆದಿಕಾಲದಿಂದ ತನ್ನ ಕಾಲದ ವರೆಗೆ ಕಾಶ್ಮೀರದ ಸಂಪೂರ್ಣ ಚರಿತ್ರೆಯನ್ನು ಕಲ್ಹಣ ಬರೆದಿದ್ದಾನೆ. ಪ್ರತಿಯೊಬ್ಬ ರಾಜನ ಆಳ್ವಿಕೆಯನ್ನೂ ವಿವರವಾಗಿ ಚಿತ್ರಿಸಿದ್ದಾನೆ. ಪುರಾತನ ರಾಜಾವಳಿ ಕಥೆಗಳು, ದಾನಪತ್ರಗಳು, ಶಿಲಾಲೇಖನಗಳು. ಶಾಸನಗಳು ಮತ್ತು ಆಧಾರಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ತನ್ನ ಸಂಶೋಧಕ ದೃಷ್ಟಿಯನ್ನು ತೋರಿಸಿದ್ದಾನೆ. ಅದರಲ್ಲಿ ಜನಜೀವನವೂ ಹಾಸು ಹೊಕ್ಕಾಗಿದ್ದು ಇದೊಂದು ಸುಂದರ ಕಾವ್ಯ ಮಾತ್ರವಲ್ಲದೆ ಇತಿಹಾಸವೂ ಆಗಿದೆ.

	ಚರಿತ್ರಕಾರನಿಗೆ ಕವಿಯ, ನಾಟಕಕಾರನ ಹಾಗೂ ವಿಜ್ಞಾನಿಯ ದೃಷ್ಟಿ ಮತ್ತು ನಿಷ್ಠೆ ಅತ್ಯಗತ್ಯವೆಂದು ಈ ಎಲ್ಲ ಲೇಖಕರೂ ತೋರಿಸಿಕೊಟ್ಟಿದ್ದಾರೆ.									   
 (ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ